ಬಾಳ ಬುತ್ತಿ ಹೊತ್ತು ನಿಂತಿ

ಏತಕೋ ಮರುಳ ತಮ್ಮ ಯಾಕಿಂಗಾಡ್ತಿಯೊ ತಮ್ಮ
ಅಡವತ್ನ್ಯಾಗ ಐಸಿರಿ ಬಂದ ಹಂಗ ||ಪ ||

ಉಪ್ಪು ನೀರು ಕುಡಿದ ದೇಹ ಮುಪ್ಪ ಕಾಣುವುದೋ
ಮುಪ್ಪ ಬಂದ ವಯಸ್ಸಿಗೆ ಹಬ್ಬ ಏತಕೋ ನಿನಗೆ
ಗಾಣದೆತ್ತಿನಂಗೆ ದುಡಿಯಲೊಲ್ಲೇಯೆಂದೆ ಕುಂತಲ್ಲೆ
ಬಂತಲ್ಲೋ ನೂರಾರು ಬ್ಯಾನಿ ನಿಂಗೆ

ಸಾಸಿವೆಯಂಗೆ ಸವಿಸಿದ ಜೀವಕ್ಕೆ ಸಾವಿಲ್ಲೋ
ತಮ್ಮ ಸಾವಿಲ್ಲೋ
ಗುಂಪುಗೂಡಿ ಇಟ್ಟ ಸಂಪತ್ತೆಲ್ಲ ನಿನ್ನ ಬೆನ್ನಟ್ಟಿ ಬರುವುದೇನೊ ತಮ್ಮ. ಬರುವುದೇನೊ ತಮ್ಮ

ಮಂದ್ಯಾಗ ಬರಲಿಲ್ಲ ಮಂದಿ ಮಕ್ಳು ಅನ್ನಲಿಲ್ಲ
ವಿರಸದಿ ಮಾತಾಡಿ ವಿಷ ತುಂಬಿಕೊಂಡಿಯಲ್ಲೊ
ಎಣಿಸಿ ಬಂದ ಹಾದಿ ನಶಿಸಿ ಹೋಯಿತಲ್ಲೊ
ಹರವ್ಯಾಣ ಅನ್ನದ ಋಣ ತೀರಿತಲ್ಲೊ

ಸಾವಿನ ಗಂಟಿ ಬಡಿದು ಹೊಂಟೆಲ್ಲೊ ನೀ ಇಂದು
ಹೊರಲಾಕ ಸಿಗಲಿಲ್ಲ ನಾಲ್ಕಾರು ಮಂದಿ ನಿಂಗ
ಸುಡುವ ಬೆಂಕಿಯು ಸುಡಲಿಲ್ಲ ನಿನ್ನ ದೇಹ
ಪಾಪ ತೊಳೆಯುವ ಗಂಗೆ ನೂಕಿದಳಲ್ಲೊ ನಿನ್ನ

ಗುರುವಿನ ಗುಲಾಮನಾಗಿ ಹಿರಿಯರಿಗೆ ಹಣ್ಣಾಗಿ
ಎಲ್ಲರಿಗೂ ಬೇಕಾಗಿ ಗುರುವಿನ ಪಾದಕ್ಕೆ ಶರಣೆನ್ನೋ
ಮುಕುತಿಯ ಸನಿಹ ಬರುವೆಯಲ್ಲೋ ನೀ..

- Irayya Mathad

27 Dec 2015, 07:15 am
Download App from Playstore: