ನೆನಪು ಮರಳಿ..

ನೆನಪು ಮರಳಿ ಸುಳಿಯುತಿದೆ,
ಸೋತ ಮನವ ಕೆಣಕುತಿದೆ,
ಸತ್ತ ಬಳ್ಳಿಯಲ್ಲಿ ಅರಳಿ
ಗತದ ಘಮವ ಸೂಸುತಿದೆ.

ಆಸರೆಗೆ ಅಂಗಲಾಚಿ,
ಹನಿ ಪ್ರೇಮಕೆ ಹೃದಯ ಚಾಚಿ,
ಕಾದು ಸೋತ ಭಾವದುರಿಯ
ಹೊತ್ತು ತರುತಿದೆ
ಮತ್ತೆ ಬರುತಿದೆ.

ಕಳೆದುದರ ಹೊಳಪನರಸಿ,
ಉಳಿದುದರ ಬೆಳಕ ಮರೆಸಿ,
ಸಿಗದ ಮೋಹ ತೀರದೆಡೆಗೆ
ಮನವ ನಡೆಸಿದೆ
ಅಲೆಸಿ ದಣಿಸಿದೆ.

ಯಾರ ಹೃದಯ ಯಾರ ನೆಲೆಯೋ,
ಯಾರ ಸೆಳೆವುದ್ಯಾವ ಸೆಲೆಯೋ,
ಬಯಕೆ ಬೂದಿಯಡಿಯ ಕಾವು
ಹೊತ್ತಿ ಉರಿದಿದೆ,
ಮತ್ತೆ ಸುಡುತಿದೆ

- ವಿನಾಯಕ ಭಟ್

19 Dec 2015, 02:49 am
Download App from Playstore: