ಓ ಮಳೆಯೇ...
ಸೋಗೆ ಮನೆಯ ಛಾವಣಿ ಸೀಳಿ
ಸೆಗಣಿ ಬಳಿದು ಅಮ್ಮ ನಡು ಬಗ್ಗಿಸಿ
ಗುಡಿಸಿ, ಸಾರಿಸಿ ನಯ ಮಾಡಿದ
ಒಡಕಲು ನೆಲಕೆ ಬಿದ್ದು ಪಟಪಟನೆ
ಸದ್ದು ಮಾಡಿ, ಬಡತನಕೆ ಬಣ್ಣ ಬಳಿದು ತೋರಿಸಿದ
ಓ ನಿರ್ದಯಿ ಮಳೆ ಹನಿಯೆ...
ನೀ ಎಂದಾದರೂ ಅರಿತೆಯಾ
ಬಡವನ ಬವಣೆಯನ್ನು ?
ಯಾಕೆ ಅರಿಯಲಿಲ್ಲ ಮಗುವೆ
ನಿನ್ನಪ್ಪ ಅಮ್ಮ ಕಂಡೋರ ಹೊಲಗದ್ದೆಗಳಲಿ
ಹಸಿವ ಮರೆತು ಮಣ್ಣು, ಗೊಬ್ಬರ, ಕಲ್ಲು ಹೊತ್ತು
ದುಡಿದು ಬೆವರ ಸುರಿಸುವಾಗ
ಅವರ ಕಷ್ಟವರಿತು ಹನಿ ಸಿಂಚನ ಮಾಡಿ
ಧೋ ಎಂದು ಸುರಿದು ಅವರ ತಣಿಸಿ,
ಬೆವರ ತೊಳೆದು ತಣ್ಣಗಾಗಿಸಿದ್ದು
ನಾನಲ್ಲವೇ ಕಂದಾ ?
ಹೋಗು ಹೋಗೆಲೆ ಮಳೆಯೆ,
ಸಾವಿರ ಕವಿಗಳು ನಿನ್ನ ಹನಿ ಹನಿಯನೂ ಹೆಕ್ಕಿ
ಅದಕೆ ಸುಳ್ಳೇ ಸಂಭ್ರಮದ ಬಣ್ಣ ಬಳಿದು
ಹಾಡಿ ಹೊಗಳಿದ ಪರಿಗೆ ನೀ ಮೇಲೇರಿರುವೆ ಸೊಕ್ಕಿ
ಬಿಸಿಲ ಜಳಕೆ ಬಾಯಾರಿ ದುಡಿವ ದೇಹ
ಹನಿ ನೀರಿಗೆ ಪರಿತಪಿಸುವಾಗ
ನಿನಗೆ ಬರಲಿಲ್ಲ ಕರುಣೆ ಉಕ್ಕಿ.
ಅರಿತೆ ಮಗುವೆ ನಿನ್ನ ಅಂತರಂಗದ ಕೂಗು
ನನಗಿಲ್ಲ ಬರಿದೆ ಬಡಾಯಿಗಳ ಸೋಗು
ನನ್ನ ತಾಯಿ ಪ್ರಕೃತಿ ಮಾತೆ
ಹಾಕಿದ ಗೆರೆಯ ದಾಟಿ ಬರಲಾರೆನೇಳು
ಇದು ನನ್ನ ಸಂವೇದನೆಯ ಸೋಲು !
- ಶ್ರೀಗೋ.
10 Nov 2015, 02:58 am
Download App from Playstore: