ಮಾನವ ಆಡಂ ಕಾಲದಿಂದಲೂ ತುಂಟ

ಮಾನವ ಆಡಂ
ಕಾಲದಿಂದಲೂ ತುಂಟ!

ಬೇಡದ್ದನ್ನೇ ಮಾಡುವ ತರಲೆ
ನೋಡದ್ದನ್ನೇ ಹುಡುಕುವ ತೀಟೆ
ಇಲ್ಲದ್ದನ್ನೇ ಕಲ್ಪಿಸುವ ಮುಕ್ಕಣ್ಣ
ಹುಟ್ಟೂರ ಬಿಡುವ ಅಲೆಮಾರಿ!

ನೆಲವೆಲ್ಲಾ ತಿರುಗಿ
ನೀರೆಲ್ಲಾ ಈಜಿ
ಗಗನಕ್ಕೆ ಹಾರಿ
ವಿಶ್ವದ ಅಂಚು
ಹುಡುಕುವ ತುಂಟ!

ಮಾನವ ಆಡಂ
ಕಾಲದಿಂದಲೂ ತುಂಟ!

ವಿಷ್ಣುವಿನ ಹೊಕ್ಕಳಿಂದ
ಬ್ರಹ್ಮನ ತೆಗೆದ!
ಆ ಬ್ರಹ್ಮನಿಗೆ ಮಗಳನ್ನೇ ಕಟ್ಟಿದ!
ವಿಷ್ಣುವಿಗೆ ಸೀರೆ ಉಡಿಸಿ
ಶಿವನ ಕೈಗೆ ಅಯ್ಯಪ್ಪನ ಕೊಟ್ಟ!

ಮಾನವ ಆಡಂ
ಕಾಲದಿಂದಲೂ ತುಂಟ!

ಸಿಕ್ಕಿದ್ದನ್ನೆಲ್ಲಾ ಒಡೆದೊಡೆದು
ಆಟಂ ಹುಡುಕಿದ!
ಅದನ್ನೂ ಅಸ್ತ್ರ ಮಾಡಿ
ಕಾದಾಟಕ್ಕೆ ಹೊಸ ರೂಪ ಕೊಟ್ಟ!
ಬದುಕುವ
ಬದುಕೇ ಇರುವ ಆಸೆ ಹೊತ್ತ.
ಸಾಯುವ ಸಾಯಿಸುವ
ಹೊಸ ಹೊಸ ದಾರಿ ಕಂಡ.

ಮಾನವ ಆಡಂ
ಕಾಲದಿಂದಲೂ ತುಂಟ!

- ನಂದೀಶ

21 Jul 2015, 10:43 am
Download App from Playstore: