ಕೊಲ್ಕಾತಾ
ಕೊಲ್ಕಾತಾ
----------------
ಬಿಟ್ಟು ಬಂದರೂ ಮನಸು ಬಿಡದ ಊರು
ಕಣ್ಣು ಮುಚ್ಚಿದರೂ ಕಾಣುವ ಹೂಗ್ಲಿ ನೀರು
ಊರೆಲ್ಲಾ ಝಗಝಗಿಸುವ
ದುರ್ಗಾಷ್ಟಮಿಯ ಜೋರು
ಹರಟೆ ವಾದಗಳ ನಿಪುಣ ಸೋಮಾರಿ ಜನರು.
ಬಿಟ್ಟು ಬಂದರೂ ಬಿಡದ ಊರು.
ಫ್ಲೈಓವರ್ ಕೆಳಗೆ ಜನರ ಕೇರಮ್ಮು
ಧಡಧಡ ತೆವಳುವ ಪಳೆಯುಳಿಕೆ ಟ್ರಾಮು
ರವೀಂದ್ರ ಗಾನ ಚಿತ್ರಣದ ಮೆಟ್ರೋ ಟ್ರೇನು
ಜನ ಮೀನು ಹೊರುವ ಲೋಕಲ್ ಟ್ರೇನು.
ಬಿಟ್ಟು ಬಂದರೂ ಬಿಡದ ಊರು.
ಕೈರಿಕ್ಷಾದಲ್ಲಿ ಕೂತಿರುವ ಡುಮ್ಮಿ ಸ್ಲೀವ್ಲೆಸ್ಸು
ಏದುತ್ತ ಎಳೆಯುವ ಬಿಹಾರಿ ಷೂಲೆಸ್ಸು
ಗಡಗಡಿಸುವ ಅಗ್ಗದ ನೀಲಿ ಬಸ್ಸು
ಕೆಲವೊಂದು ಕೆಂಪು ಮಿನಿಬಸ್ಸು.
ಬಿಟ್ಟು ಬಂದರೂ ಬಿಡದ ಊರು.
ರೋಡಿಗೆ ಅರಿಶಿನ ಹಚ್ಚುವ ಅಂಬಾಸಡರ್ ಟ್ಯಾಕ್ಸಿಗಳು
ಟ್ರಾಫಿಕ್ ತಡೆದು ತಲೆತಿನ್ನುವ ದಾರಿ ಸಭೆಗಳು
ಫುಟ್ಪಾತಿನ ಅವಲಕ್ಷಣದ ಅಂಗಡಿಗಳು
ಕೊಳಕಿನ ಮಧ್ಯೆಯೇ ಕಾಳಿ ಗುಡಿಗಳು.
ಬಿಟ್ಟು ಬಂದರೂ ಬಿಡದ ಊರು.
ಅರಮನೆ ನಾಚಿಸುವ ವಿಕ್ಟೋರಿಯ ಸ್ಮಾರಕ
ನೇಶನಲ್ ಲೈಬ್ರರಿಯ ಕರುಚರ್ಮ ಹೊದಿಕೆಯ ಪುಸ್ತಕ
ನೇಶನಲ್ ಮ್ಯೂಸಿಯಂನ
ಕಳೇಬರಗಳ ಕೌತುಕ
ತೂಗಾಡುವ ಹೌರಾ ಸೇತುವೆಯ ಪುಳಕ.
ಬಿಟ್ಟು ಬಂದರೂ ಬಿಡದ ಊರು.
ಐದಕ್ಕೇ ಮುಳುಗುವ ಸೂರ್ಯನ ಚಂದ
ಪಾರ್ಕಿನಲ್ಲಿ ಪ್ರೇಮಿಗಳ ಎಗ್ಗಿಲ್ಲದ ಚಕ್ಕಂದ
ಅದ ನೋಡಿ ಅಸೂಯೆ ಪಡುತ್ತ ಅಸಭ್ಯ ಗೊಣಗುವ ಹಿರಿಮಂದಿ.
ಬಿಟ್ಟು ಬಂದರೂ ಬಿಡದ ಊರು.
- ನಂದೀಶ
21 Jul 2015, 10:38 am
Download App from Playstore: