ಮಳೆ ಜಿನುಗು

ಮಳೆ ಜಿನುಗೆ,
ತೊಟ್ಟಿಕ್ಕಿ ತೊಟ್ಟಿಕ್ಕಿ
ತಟ್ಟಿ ತಟ್ಟಿ ನನ್ನ ನೆನಪ
ಮೇಲೆಬ್ಬಿಸಿದೆಯಾ ?

ಕಲ್ಲು ಕಟ್ಟಿ
ಮನದ ಪಾಳು ಬಾವಿಯಲಿ
ಮುಳುಗಿಸಿದ
ಮುಳ್ಳು ಹೂಗಿಡಳ
ಅರಳಿಸಿದೆಯಾ ?

ಬೇಡವೆಂದು ಬಿಸುಟ
ಬಳ್ಳಿಯ ಬೇರಿಗೆ
ನೀರಾಗಿ
ಬೇಗುದಿಯ ಕೊನರು
ನೀ ಬರಿಸಿದೆಯಾ ?

ಜಿನುಗದಿರು ಮಳೆಯೆ,
ಜೇನು ಹುಟ್ಟು
ಘಾತಗೊಂಡಂತೆ
ಕೈ-ನಾಲಿಗೆಯೊಡ್ಡಿ
ರುಚಿ ನೋಡುವ ತವಕವಿಲ್ಲದ
ಈ ಭೂಮಿಗೆ !

- ಶ್ರೀಗೋ.

01 Nov 2014, 08:10 am
Download App from Playstore: