ದುಗುಡದಿ ನಡುಗಿ
ದುಗುಡದಿ ನಡುಗಿ, ನಡುರಾತ್ರಿ ಎದ್ದು,
ಅರೆನಿದ್ದೇಲಿ ಕುಗುರಿ ಕುಳಿತೆ....,
ರಾತ್ರಿಯ ಮೌನವು ಮೌನವನ್ನೇ ಹೊದ್ದು
ಮದದಿ ಮಲಗಿದಂತಿತ್ತು....;
ದುಗುಡದ ಕಾರಣ ಹೊಳೆಯದೆ
ತೂಗುತ್ತ ಕುಳಿತೇ ಇದ್ದೆ.....,
ತಲೆಕೊಡವಿ, ಕಣ್ಣುಜ್ಜಿ ಯೋಚಿಸಲು,
ಹೊಳೆದದ್ದು .... ಆ ಹುಡುಗಿ...;
ದಿನಾಲು ಬೆಳಗ್ಗೆ ಬಾಗಿಲಲಿ ಹಾಲಿರಿಸಿ,
'ಹಾಲು ಸಾರ್' ಎಂದು ರಾಗದಿ ಕೂಗುತ್ತಿದ್ದ
ಏಳನೆಯ ತರಗತಿಯ ಆ ಮುದ್ದು ಹುಡುಗಿ,
ಕಳೆದೈದು ದಿನದಿಂದ ಬಂದಿಲ್ಲ....!
ಈಗ ಈ ವಿಷಯ ಹೊಳೆದದ್ದೇಕೆ !?
ಥಟ್ಟನೆ, ಮನದಲಿ ನತದೃಷ್ಟೆ ನಂದಿತಾಳ
ದಾರುಣ ಕಥೆ ತೇಲಿ ಬಂದು
ನಿದ್ದೆಯೇ ನಂದಿ ಹೋಯಿತು ...;
ಕತ್ತಲೆಯಲಿ ಕೈಸವರಿ
ಮಗ್ಗುಲಲಿ ಮಲಗಿದ್ದ
ನಾಲ್ಕು ವರ್ಷದ ಮಗಳ
ತಲೆ ನೇವರಿಸಿ, ನೀಳ ನಿಟ್ಟುಸಿರಿಟ್ಟೆ....;
ಈ ಜಗದ ಹೆತ್ತವರದೆಷ್ಟು ಜನ
ಹೀಗೆ ನಿದ್ರೆಯಲಿ ಕಳವಳಿಸುವರೋ ?
ಎಂದ ಮನ, ಕತ್ತಲೆಯ ಮೌನದಲಿ
ಮೌನವಾಗಿ ರೋಧಿಸಿತು....;
- ಡಾ. ರವೀಂದ್ರ ಅಂಗಡಿ
05 Feb 2015, 09:11 am
Download App from Playstore: