ನನ್ನವಳು ಮುಡಿದ ಮಲ್ಲಿಗೆ
ಅಪರೂಪಕ್ಕೊಮ್ಮೆ
ನೀ ಮುಡಿವ ಮಲ್ಲಿಗೆಯರಳು
ಮನದಿ ನಿಂತು ಮುದವೀಯಲು ,
ನನಗೆ ಅಮಲೋ ಅಮಲು.
ಮಲ್ಲಿಗೆ ಸರದ
ತುದಿಯ ತುಂಟ ಹೂವೊಂದು
ಎಡೆಬಿಡದೆ ನಿನ್ನ ಕೆನ್ನೆ ಚುಂಬಿಸುವಾಗ
ಹೂವಿಗೇ ಖಟ್ಲೆ ಹಾಕುವ ಹುನ್ನಾರ ನನಗೆ.
ಈ ಹುನ್ನಾರವರಿತ ಎಲ್ಲ ಹೂಗಳು
ಒಟ್ಟಾಗಿ...
ಘೋಷಣೆ ಕೂಗಿ....
ಇದು ತಮ್ಮ ಆಜನ್ಮಸಿದ್ಧ ಹಕ್ಕೆಂದು
ಪ್ರತಿಭಟಿಸಲು,
ನಾನು ಐಲುಪೈಲು.
ಸರಿ, ಸಂಧಾನದ ಮಾತಿಗೆ
ದಿನ ಗೊತ್ತಾಗಿ,
ಒಟ್ಟಾಗಿ ಸೇರಿರಲು,
ಹೂಗಳೆ ತಮ್ಮ ತೀರ್ಮಾನ
ನನ್ನ ಮೇಲೆ ಹೇರುವುದೇ.....!?
ತೀರ್ಮಾನ ಇಂತಿತ್ತು -
ನಿನ್ನವಳು ಮಲ್ಲಿಗೆ ಮುಡಿದಂದು
ನೀನವಳನ್ನ ನೋಡೋದು ನಿಷಿದ್ಧ .
ತೀರ್ಮಾನ ಪಾಲಿಸ್ದೇ ಇದ್ರೆ
ಇರು ಎಲ್ಲದಕೂ ಸಿದ್ಧ .
ಮಲ್ಲಿಗೆ ಸಾವಾಸ ಅಲ್ಲ ಮಾರಾಯ್ರೆ...
ಮಲ್ಲಿಗೆ ಮಾತಂದ್ರೆ ಮಾತು,
ಮೈಮೇಲೇ ಬರ್ತವೆ.....!!!!
ಅಂದಿನಿಂದ ಮಾರ್ಕೆಟಲ್ಲಿ ಮಲ್ಲಿಗೆ ಕಂಡ್ರೆ
ವಾರೆಗಣ್ಣಲ್ಲಿ ನೋಡತಾ, ಸೈಲೆಂಟಾಗಿ ಸೈಡಿಗ್ಹೋಗಿಬಿಡ್ತೀನಿ....
ಹೆಣ್ತಿ ಹೂ ತಂದಿಲ್ಲ ಅಂತ ಬೈದ್ರೂ ಪರ್ವಾಗಿಲ್ಲ .
- ಡಾ. ರವೀಂದ್ರ ಅಂಗಡಿ
05 Feb 2015, 05:04 am
Download App from Playstore: