ಫೇಸ್‌ಬುಕ್ ಎಂಬ ಜನಾರಣ್ಯ
ತರಗೆಲೆಯಂತೆ ಉದುರುವ
ಪ್ರಕಟಣೆಗಳು..
ಕೆಲವು ಹಸಿ, ಕೆಲವು ಬಿಸಿ
ಒಮ್ಮೆ ಘಮಲು
ಕೆಲವು ತೊದಲು
ಯಾರದೋ ನೋವು
ಯಾರದೋ ನಲಿವು
ಅಲ್ಲಲ್ಲಿ ಜಾತಿ ಚರ್ಚೆ!
ತಿಳುವಳಿಕೆಯದೇ ಕೊಂಚ ಕೊರತೆ!
ಹರಿವ ಕವನಗಳ ಸಾಲು
ಬರೆದು ತೇಗುವ ತೆವಲು
ಶಿಥಿಲಗೊಂಡು ಉರುಳುವ
ಸ್ನೇಹಗಳು ಕೆಲವು.
ಶಿಲೆಯಂತೆ ಘನವಾಗಿ ನಿಂತ
ಬಂಧಗಳು ಹಲವು.
ವಿಜ್ಞಾನ ತಂದ ಕೀಲಿಮಣೆಯಲ್ಲಿ
ಜ್ಯೋತಿಷ್ಯದ ಅಂಕಿ-ಸಂಕಿ
ಇಂಟರ್ನೆಟ್ಟಿನಲೂ ತುಂಬಿಹುದು
ಧರ್ಮದ ದುರ್ಗಂಧದಮಲು !
ಹರಟೆಯ ಬರಾಟೆಯಲಿ
ಮರೆತ ಸಮಯದ ಕಂದೀಲು
ಪ್ರೀತಿ ಪ್ರೇಮದ ನೆಪದಲಿ
ಕಾಮ ದಾಹದ ಕೊಯಿಲು
ಎಂದೋ ಮರೆತಿದ್ದವರ
ಮರಳಿ ನೀ ಪಡೆವೆ..
ಎಂದೂ ತಿಳಿಯದಿದ್ದವರ
ಜೊತೆಗೂ ನೀ ಬೆರೆವೆ..
ಫೇಸ್‌ಬುಕ್‌ನ ಓ ಪಯಣವಾಸಿ
ನಿನ್ನನೇ ನೀನೆಲ್ಲಿ ಕಳೆದುಕೊಂಡಿರುವೆ ?
- ಶ್ರೀಗೋ.
17 Jan 2015, 01:35 pm
Download App from Playstore: