ಹೂವು

ನನ್ನ ಎಳೆ ವಯಸ್ಸಿನಲ್ಲಿ ನನ್ನದೇ ಗುಡಿಸಿಲಿನಲ್ಲಿದ್ದ ಕಾಡ ಹೂವೊಂದು ನಗುವುದ ಕಂಡೆ
ಬೇಡಿ ಬಂದವನಿಗೆ ನೀಡದೆ ಅದರ ಸೌಂದರ್ಯವನ್ನು ಕಣ್ತುಂಬಿಕೊಂಡೆ.

ಅಕ್ಕಪಕ್ಕದ ಹೂವುಗಳು ನಲುಗುವುದ ಕಂಡೆ ನೀನೊಬ್ಬಳೆ ನಗುವುದ ಕಂಡೆ.

ಬೇಡ ಬೇಡವೆಂದರೂ ಬೇಡನ ಕರೆದು
ಬಾಡಿಹೋಗುವ ಮುನ್ನ ಬಳುವಳಿಯಾಗಿ ನೀಡಿದೆ.

ನೀಡುವ ಮುನ್ನ ನನಗರಿವಿರಬೇಕಿತ್ತು.
ಬತ್ತಳಿಕೆಯಲ್ಲಿ ಮುಳ್ಳುಗಳೆ ತುಂಬಿರುವ ಬೇಡನಿಗೆ
ಹೂವಿನ ಮೃದುತ್ವ ಹೇಗೆ ಅರಿತಾನು..

ಇಲ್ಲೇ ಬಾಡಿದ್ದರೆ ನಿನ್ನ ಬೀಜಗಳಿಂದ ಹೂ ತೋರಣವೇ ಗುಡಿಸಲ ಮುಂದೆ ಇರುತ್ತಿತ್ತೊ ಏನೋ .
ಆಗಾಗ ಬೇಲಿಯಲ್ಲಿದ್ದ ಹೂಗಳ ಕಂಡಗ ನಿನ್ನೆ ಹುಡುಕುತ್ತಿದ್ದೆ ನಿನ್ನ ವಂಶವೃಕ್ಷ ಇರಬಹುದೆಂದು.

ಒರಟ ಅವನು ಮುಳ್ಳುಗಳ ಉಳಿಸಿ
ಎಸಳುಗಳ ಎಸೆದಿರಬಹುದು.
ಹೂವಿಗೆ ಮುಳ್ಳು ಕಾವಲು ಹೊರತು ಆಸರೆಯಲ್ಲ..
ಆಸರೆ ನೀಡುವ ದುಂಬಿ ಇತ್ತ ಕಡೆ ಸುಳಿದಿಲ್ಲ.

ಈ ಇಳಿ ವಯಸ್ಸಲ್ಲಿ ಎದುರಿದ್ದರೂ ನನ್ನ ಕಣ್ಗಳು ನಿನ್ನ ಗುರುತಿಸಲಾರವು.
ನೀ ಚುಚ್ಚಿದರೂ ಮುಳ್ಳುಗಳು ನನ್ನ ಸ್ಪರ್ಷಿಸಲಾರವು.


-ರಂಜಿತ ವಕ್ಕೋಡಿ, ತುಮಕೂರು

- ರಂಜಿತ ವಕ್ಕೋಡಿ

22 Mar 2025, 07:51 pm
Download App from Playstore: