ನನ್ನ ಮೊದಲ ಕವನ

ಅವಳು

ನೀಲಾಕಾಶದುದ್ದಕ್ಕೂ ಹಾರುವ ಬೆಳ್ಳಕ್ಕಿ ಸಾಲು ಮೋಡ ಕವಿಯುತ್ತಿರುವಂತೆಯೇ
ಮನ ಗರಿಗೆದರಿ ನವಿಲು,
ಕಪ್ಪನೆಯ ಆಗಸದಲ್ಲಿ ಮಿಂಚಿದ ನಕ್ಷತ್ರ
ಕಂಗಳಿನವಳು

ಮೆಲ್ಲಗುದುರುವ ಮುಗಿಲಮಳೆ ಅಕ್ಷತೆಯ ಕಾಳಿಗೆ
ಹಸಿರ ತೆನೆ ಬಳುಕಿ ತೊನೆದಾಡಿ ಹುಲ್ಲದಳ ದಳದ ತುಂಬೆಲ್ಲಾ ಇಬ್ಬನಿ ಹೂ
ಮುಡಿದು ಅರಳಿದವಳು
ಮುಂಜಾನೆ ಮಂಜಿನಲಿ ಹೊಂಬೆಳಕ
ಲೀಲೆಯಲಿ ಮಲ್ಲಿಗೆ ನಗೆ ಬೆಳಗಿ ಜೊತೆಯಾದವಳು. ಹನಿಹನಿ ರಾಸಲೀಲೆಯಲ್ಲಿ ಕುಣಿದು
ಕೆರೆ ಬಾವಿ ಕೊಳ್ಳಗಳ ಎದೆ ತುಂಬಿಕೊಂಡವಳು

ನೆಲಮುಗಿಲ ಒಲವಿನೊಸಗೆ
ಜೀವ ಜೀವದ ಬೆಸುಗೆಯಾದವಳು
ನೀರುಣಿಸಿ ಮಣ್ಣದಾಹವನಿಳಿಸಿದ ಚೈತ್ರ ಚಿಗುರಿನ ಚೆಲುವಿನವಳು
ಹಸಿದ ಒಡಲಿಗೆ ಹಸಿರ
ತುತ್ತ ನಿಟ್ಟ ಕರುಣಾಳು

ತುತ್ತು ಮುತ್ತುಗಳನೊಂದೊಂದೆ ಎಣಿಸಿ ಪೋಣಿಸಿ ಮಾಲೆಯಾಗಿಸಿ
ಉಸಿರಿಂದುಸಿರಿಗೆ ಜೀಕುವ ಮಾಯೆಯವಳು
ತನು ಬಳಸಿ ಮನವನಾವರಿಸಿ ಮಿಡಿವ ಮೋಹದವಳು
ತನ್ನಾತ್ಮ ಸಖನ ಪ್ರೇಮದ ಛಾಯೆ ಅವಳು.

-ರಂಜಿತ ವಕ್ಕೋಡಿ, ತುಮಕೂರು

- ರಂಜಿತ ವಕ್ಕೋಡಿ

19 Mar 2025, 11:09 pm
Download App from Playstore: