ನದಿ ಮತ್ತು ಕಡಲು ............
ಭವದ ಬಾವ ಬಾವನೆಗಳ ನೆನಪುಗಳ ಸರಮಾಲೆ
ತಂಗಾಳಿಯಂತೆ ಬೀಸುತಿತ್ತು ಮನಸ್ಸಿಗೆ ನೆಮ್ಮದಿ ತರುತ್ತಿತ್ತು ಅಲೆಯಲ್ಲಿ ಅಲೆ ಅಲೆಯಾಗಿ ತೇಲುವ ಮೋಡಗಳಲ್ಲಿ ಅವಿತರುವ ಆ ಬೆಟ್ಟಗುಡ್ಡಗಳನ್ನೆಲ್ಲ ಅಲೆಮಾರಿಯಂತೆ ಅಲೆದೆಲದು ಅದೇ ಸಾಲಿನ ಯಾವುದೋ ಬೆಟ್ಟವನ್ನು ಹತ್ತಿ ತುದಿಯಲ್ಲಿರುವ
ಆ ಒಂಟಿ ಬೇವಿನ ಮರದ ನೆರಳಲ್ಲಿ ಹರಡಿಕೊಂಡ
ಶತಮಾನಗಳ ಕಂಡ ಬಂಡೆಯ ಮೇಲೆ ಕುಳಿತು
ಸುತ್ತಲೂ ನೋಡಿದೆ ಆ ಹಚ್ಚ ಹಸುರಿನ ಪ್ರಕೃತಿಯ ಮಡಿಲು ಮೌನವನ್ನು ಮರೆಯುವಂತೆ ಮಾಡುವ
ಹಕ್ಕಿಗಳ ಚೆಲಿಪಿಲಿಯ ನಿನಾದ ಗಂದರ್ವ ಗಾನ
ಬದುಕಿನ ಅರ್ಥ, ನಿರರ್ಥಕತೆಯ ಬಗ್ಗೆ ಯೋಚಿಸುತ್ತ
ಆಕಾಶವನ್ನೊಮ್ಮೆ ದಿಟ್ಟಿಸುತ್ತ ಮಲಗಿದೆ.
........... ......... .........,
ಅನಾದಿಕಾಲದಿಂದ ಬೀಳುತ್ತಿರುವ ಸುರಿಮಳೆ,
ಜಡಿಮಳೆ, ಬಿರುಮಳೆ, ತುಂತುರು ಮಳೆ
ಜಿನಗು ಮಳೆಗಳ ಹನಿಗಳೆಲ್ಲ ಸೇರಿ ಚಿಕ್ಕ ಚಿಕ್ಕ
ತೊರೆಗಳಾಗಿ ಬಾಗಿ,ಬಳುಕಿ ಜಿಗಿದು ನಲಿದು ದುಮ್ಮಿಕ್ಕಿ ಪುಟಿದೆದ್ದು ಜಲಪಾತಗಳಾಗಿ ಯಾವುದೋ ಕಂದಕ
ಕಣಿವೆಗಳಲ್ಲಿ ಒಂದಾಗಿ ವರ್ತಮಾನದರೂಪ ಪಡೆದುಕೊಳ್ಳುತ್ತ ಎಲ್ಲ ಅಡೆತಡೆಗಳನ್ನು ದಾಟಿ ಋತುಮಾನ, ಕಾಲಮಾನಗಳಿಗೆ ತಕ್ಕಂತೆ ಹಿಗ್ಗುತ್ತ, ಕುಗ್ಗುತ್ತ, ಕರಗಿ, ಮರೆಯಾಗಿ, ಮರುಹುಟ್ಟು ಪಡೆಯುತ್ತ , ಅಲ್ಲಲ್ಲಿ ಹರಿವ ಹಳ್ಳಕೊಳ್ಳಗಳೆನ್ನೆಲ್ಲ ಒಡಲ್ಲಲ್ಲಿ ತುಂಬಿಕೊಳ್ಳುತ್ತ ಹರಿವು, ಹರವುಗಳನ್ನು ಬದಲಿಸುತ್ತ ಕ್ರಮಿಸುವಹಾದಿಯನ್ನು ಅನ್ವೇಷಿಸುತ್ತ ಸಕಲ ಜೀವರಾಶಿಗಳ ಜೀವಗಂಗೆಯಾಗಿ ಬದುಕಿನ ಸ್ಪೂರ್ತಿಯಾಗಿ ಸೃಷ್ಟಿಗೆ ಮರುಸೃಷ್ಠಿಯ ಕೊಡುಗೆಯ ನೀಡುತ್ತ ತನ್ನದೇ ಪ್ರಭಾವಳಿಯೋಂದನ್ನು ಬೆಳಸುತ್ತ
ತನ್ನ ಗುರಿ ಕಡೆಗೆ ಸಾಗುತಿತ್ತು.
...... ....... .......
ಯಾರೋ ಕೂಗಿ ಕರೆದಂತಾಗಿ ಎಚ್ಚರಗೊಂಡು
ಆ ದಿಕ್ಕಿನ ಕಡೆ ಹೋದೆ..............
ಆ ದನಿ ನದಿಯ ಸಮೀಪಕ್ಕೆ ಕರೆದೊಯ್ದಿತ್ತು.
ನದಿ ತನ್ನಷ್ಟಕ್ಕೆ ತಾನೆ ಆ ಪರಿಸರದ ತಾಳಕ್ಕೆ ತಕ್ಕಂತೆ
ರಾಗಬದ್ಧವಾಗಿ ಸುಶ್ರಾವ್ಯಾಗಿ ಹಾಡೊಂದನ್ನು ಹಾಡಿಕೊಳ್ಳುತಿತ್ತು. ನಾನು ಬಂದ ಕ್ಷಣಕ್ಕೆ ಹಾಡು
ನಿಲ್ಲಿಸಿ ಎಂದೋ ಪರಿಚಯವಿದ್ದಂತೆ ಮಾತೆಗಳೆದು
ತನ್ನ ಕಥೆಗಳನ್ನು ಹೇಳತೊಡಗಿತು .......,
........ ........ ........,
ನದಿ ತನ್ನ ಪಾತ್ರ ಹಿಗ್ಗಿಸುತ್ತ ವೇಗ ಹೆಚ್ಚಿಸುತ್ತ
ಗಮ್ಯ ಅಂದರೆ ಕಡಲನ್ನು ಸೇರುವ ಬಯಕೆ
ನಾನು ಅದನ್ನು ಅನುಸರಿಸುತ್ತ ಹೋದೆ
ಆ ತೀರದಲ್ಲಿ ನೆಡೆದು ಸಮುದ್ರಡದೆಗೆ
ನೇರವಾಗಿ ಹೊರಟೆ ಅವಳ ನಗು
ನಗುವಿನ ಅಲೆಗಳಾಗಿ ಮಾರ್ಪಟ್ಟು
ನನ್ನ ಪಾದಗಳನ್ನು ಸೋಕುತ್ತ ತನ್ನ ಎತ್ತರವನ್ನು
ಹೆಚ್ಚಿಸಿಕೊಳ್ಳುತ್ತಾ ಸಾಗುತ್ತಿದ್ದವು
ಅವಳು ಮತ್ತು ಅವಳ ನಗು ದೃಶ್ಯಕಾವ್ಯದಂತೆ
ಗೋಚರವಾಗತೊಡಗಿತು ನಾನು ತಿರುಗಿ ನೋಡದೆ
ಅವಳತ್ತ ಸಾಗಿದೆ ಆ ನಗುವಿನ ಅಲೆಗಳು
ನನ್ನ ಎದೆಯನ್ನು ಸ್ಪರ್ಶಿಸುತ್ತಿದ್ದಂತೆ ಬೆಳಕು ಚಿಮ್ಮಿದಂತಾಯಿತು ಅವಳು ತುಂಬಾ ಪ್ರೀತಿಯಿಂದ ಅರ್ದ್ರವಾಗಿ ನೋಡುತ್ತ ನನ್ನೆಡೆಗೆ ಕೈ ಚಾಚಿದಳು
ನಾನು ಕೈ ಚಾಚಿದೆ ಅಷ್ಟೇ.........
........, .......... ........,.
ಕಡಲು ಕೇಳಿತು " ನಾನೆಂದರೆ ಯಾಕೆ ಇಷ್ಟೊಂದು ಇಷ್ಟ ನಿನಗೆ?"
ನಾನು ಹೇಳಿದೆ "ನೀನು ನನ್ನ ಮನಸ್ಸಿನ ಅಭಿವ್ಯಕ್ತಿ ".
........,..............
(ದಿ.ಶ್ರೀ ನಾ ಡಿಸೋಜರವರ ಸ್ಮರಣೆ ಮತ್ತು ಆ
ಪಶ್ಚಿಮಘಟ್ಟಗಳ ನೆನಪು)
- ಶಶಿಧರ ಹೆಚ್ ಎನ್
23 Jan 2025, 09:31 am
Download App from Playstore: