ಬೆಳಕಿನ ಮಹಲಿನಲ್ಲಿ...

ಬೆಳಕಿನ ಮಹಲಿನಲ್ಲಿ ಕತ್ತಲಾವರಿಸಿತ್ತು
ನಿಶಬ್ದದ ಗದ್ದಲ ಕೇಕೆ ಹಾಕುತ್ತಿತ್ತು
ಸದ್ದು ಸದ್ದು ನಿಶಬ್ದದ ಸದ್ದು ಕೇಳಲಾಗದ ಸದ್ದು
ಅವಳ ಉಸಿರಾಟವೇ ಅವಳನ್ನು ಕೊಲ್ಲುವ ಹಾಗೆ.

ಹಿಂದೆಂದೋ ಕೇಳಿದ ನೆನಪು ಅಂದು ಕನಸೆಂದು
ತನಗೆ ತಾನು ಸಾಮಾಧಾನ ಮಾಡಿಕೊಂಡಿದ್ದಳು
ಇಂದು ಕೇಳಲಾಗುತ್ತಿಲ್ಲ ಅವಳಿಗೆ ಏಕೆಂದರೆ ಅದು ಅವಳ ನಿಟ್ಟುಸಿರಿನ ಸದ್ದು, ನೋವಿನ ಸದ್ದು ಬೇಡದ ಜನರಿಗೆ ಪ್ರಶ್ನೆಗಳಿಗೆ ಇಷ್ಟವಿಲ್ಲದೆ ನೀಡಿದ ಉತ್ತರಗಳ ಸದ್ದು.

ಅಪರೂಪದ ಆಸೆಗಳನ್ನು ಮಣ್ಣಲ್ಲಿ ಮರೆಯಾಗಿಸಿ
ಆ ಮಣ್ಣ ಮೇಲೆ ನಿಂತ ಹೆಜ್ಜೆಗಳ ಸದ್ದು,
ಅವಳೆಂಬ ವ್ಯಕ್ತಿಯನ್ನು ಅವಳೇ ಕಿತ್ತೆಸೆಯುವಾಗ ಹೃದಯದಮೇಲೆ ಪರಚಿದ ಸದ್ದು.

ನಗುವೂ ಅಲ್ಲಿತ್ತು ನಾಟಕೀಯವಾಗಿ ಕಣ್ಣೀರ ಮರೆಮಾಚಲು, ಬಿಕ್ಕುವಾಗ ಒಳಗಿನ ಸದ್ದು ಹೊರಹೋಗದಿರಲು..

- ಚುಕ್ಕಿ

02 Aug 2024, 01:52 pm
Download App from Playstore: