ರಾಧೆ ಪ್ರೀತಿಯ ದೇವತೆ ಮತ್ತು ಸೀತೆ?
ಸಹನೆಯ ದೇವತೆ ಇರಬೇಕು ಎಷ್ಟಿದ್ದರೂ
ಭೂಮಿಯ ಮಗಳಲ್ಲವೇ!
ಜನಕನ ಪುತ್ರಿ ಜಾನಕಿ ಜಗವ ಕಾಣದವಳಲ್ಲ ಆದರೂ ಸಹನೆಯ ಹೊತ್ತು ನಡೆದಿದ್ದಳು ತಾಳಿದವನು ಬಾಳಿಯಾನು ಅನ್ನುವ ಮಾತು ಅವಳಿಗೆ ಅನ್ವಯಿಸಲೇ ಇಲ್ಲ ಎಷ್ಟು ವಿಪರ್ಯಾಸಲ್ಲವೇ! ಅಂದೆಂದೋ ಭೂಮಿಯ ಗರ್ಭದಿಂದ ಹೊರಬರುವ ಮುನ್ನ ಅಮ್ಮನ ಮಾತಿಗೆ ರೋಧನೆಗೆ ಕಿವಿಗೊಟ್ಟಿರಬೇಕು ವೈದೇಹಿ ಭೂಮಾತೆ ತನಗೆ ತಾನು ಹೇಳಿಕೊಂಡಿರಬೇಕು ಅವಳ ಒಡಲ ತುಳಿದು ಕೃತಜ್ಞತೆ ಇಲ್ಲದೆ ಜನರು ಮಾಡಿರುವ ವಿಕೃತಗಳನ್ನು. ಬಹುಶಃ ಅಂದೆ ನಿಶ್ಚಯಿಸಿರಬೇಕು ಮೈಥಿಲಿ ಮೌನಧಾರಣೆ ಉತ್ತಮವೆಂದು ಸಹನೆಶೀಲೆ ಹೆಣ್ಣೆಂದು!
ಹೇಗಿರಬಹುದು ಆ ಸೀತೆ ಇದ್ದಿರಬಹುದು ಮುಂಜಾನೆ ಇಬ್ಬನಿಯಲ್ಲಿ ಮಿಂದ ಭುವಿಯ ಹೊಳಪಿನಂತೆ, ಉಕ್ಕಿದ ಹಾಲ ನೊರೆಯ ಮೃದುವಿನಂತೆ. ಕಡುಗಪ್ಪು ಕೇಶರಾಶಿ ತಿಳಿಗೆಂಪು ಕೆನ್ನೆಯೋತ್ತು ನಸುನಾಚಿದ ಬೆಳದಿಂಗಳಂತೆ.
ವರಿಸಿ ಬಂದ ಚಿನ್ನದ ಮಹಲಿನ ಸರದಾರ ಹೃದಯದಲ್ಲಿ ಬಚ್ಚಿಡಬೇಕಿತ್ತು ಅವಳನ್ನು ಕಾಡಿನ ಪಾಲಾಗಿಸುವ ಬದಲು!
ಗಂಡನ ನೋವಿನ ಕೂಗಿಗೆ ಮರುಗಿದ್ದೆ ಸೀತೆಯ ತಪ್ಪಾಯಿತೆ ಮತ್ತೆ ಅವನ ಸೇರಿದ ಸಂಭ್ರಮದಲ್ಲಿ ಲೋಕಕ್ಕೆ ಅಂಜಿ ಅಗ್ನಿ ಮಡಿಲ ಮಗುವಾಗಿದ್ದೆ ತಪ್ಪಾಯಿತೆ ಆದರೇನು ಬಂತು ಪ್ರಯೋಜನ ಮತ್ತೆ ಕಾಡಿನ ಪಾಲಗಲಿಲ್ಲವೇ ಅವಳು ರಾಜ್ಯದ ಜನರಿಗಾಗಿ ಮಡದಿಯ ತೊರೆದ ರಾಜನಿಗಾಗಿ!
ಮತ್ತೆ ಯಾವ ನಂಬಿಕೆಯೊತ್ತು ಹೋದಾಳು ಆ ರಾಜನ ಅರಮನೆಗೆ ಪ್ರೀತಿ ವಿಶ್ವಾಸಗಳೇ ಇಲ್ಲವಾದಮೇಲೆ!
ಸಹನೆ ಸತ್ತು ಹೋಗಿರಬೇಕು ಅವಳಲ್ಲೂ ಅಮ್ಮನ ಮಡಿಲು ನೆನಪಾಗಿರಬೇಕು ಜನರ ನಿಂದನೆಗಳು ಕೇಳಲಾರದೆ ಎಲ್ಲಿಂದ ಬಂದಳೋ ಅಲ್ಲಿಗೆ ಹೊರಟುಹೋದಳು ಸುಶೀಲೆ ತನ್ನದಲ್ಲದ ಪಾಪಿ ಪ್ರಪಂಚವನ್ನು ತೊರೆದು..
- ಚುಕ್ಕಿ
31 Mar 2024, 01:30 pm
Download App from Playstore: