ಕನ್ನಡ ಹಬ್ಬ
ಅಣ್ಣ ಅಣ್ಣ ಬಾರಣ್ಣ
ಕನ್ನಡ ಹಬ್ಬವ ಮಾಡೋಣ
ಹೆಮ್ಮೆಯ ನಾಡಿಗೆ
ಚಿನ್ನದ ಭೂಮಿಗೆ
ಎಲ್ಲರು ಒಗ್ಗೂಡಿ ನಮಿಸೋಣ
ಜಾತಿ-ಮತ ಭೇದ ಮರೆತು
ಮೇಲು-ಕೀಳು ಭಾವ ತೊರೆದು
ಕಾವೇರಿ ನೀರನು ತಂದು
ಭುವನೇಶ್ವರಿ ಪಾದವ ತೊಳೆದು
ಮಾಡೋಣ ಕನ್ನಡ ಹಬ್ಬವ ಮಾಡೋಣ
ಅಣ್ಣ ಎಲ್ಲರು ಕೂಡಿ ನಲಿಯುತ ಹಾಡೋಣ
ಅರಿಶಿಣ-ಕುಂಕುಮ ಬಾವುಟ ಚೆನ್ನ
ಗೋಡಂಬಿ ಆಕಾರದ ಭೂಪಟ ಚೆನ್ನ
ಅಮ್ಮನ ಹಣೆಗೆ ಗಂಧವ ಹಚ್ಚಿ
ಚಿನ್ನದ ಮುಡಿಗೆ ಮಲ್ಲಿಗೆ ಚುಚ್ಚಿ
ಘನತೆಯ ಬಾವುಟ ಹಾರಿಸಿ ಹಬ್ಬವ ಮಾಡೋಣ
ಅಣ್ಣ ಸಂಭ್ರಮದಿ ನಾವೆಲ್ಲರು ತೇಲೋಣ
ನಾಡನು ಕಟ್ಟಿದ ಧೀರರಿಗೆ ಮಣಿದು
ನಮ್ಮನು ಆಳಿದ ವೀರರ ನೆನೆದು
ಕಾಯದ ಬತ್ತಿಯ ಹೊಸೆದು
ತ್ಯಾಗದ ತೈಲವ ಸುರಿದು
ಬೆಳಗೋಣ ಸ್ವಾಭಿಮಾನದ ಹಣತೆ ಬೆಳಗೋಣ
ಅಣ್ಣ ನಮ್ಮ ನಾಡಗೀತೆ ಹಾಡುತ ನಲಿಯೋಣ
ಕರುಣೆಯ ಬೀಡು ಕರುನಾಡು
ಇದುವೆ ಸೌಹಾರ್ದತೆಯ ಗೂಡು
ಪರರಿಗು ಕನ್ನಡ ಕಲಿಸಿ
ನಾಡಿನ ಸವಿಯನು ಉಣಿಸಿ
ಸಿಹಿಯನು ಎಲ್ಲೆಡೆ ಹಂಚಿ ಹಬ್ಬವ ಮಾಡೋಣ
ಅಣ್ಣ ಮನದುಂಬಿ ಹಾಡುತ ನಲಿಯೋಣ
- ಶಕುಂತಲಾ
07 Oct 2023, 03:00 pm
Download App from Playstore: