ಕವನದ ಶೀರ್ಷಿಕೆ ಸ್ನೇಹ.
ಎಲೆಯೊಳ್ ಕಾಯ್ ಅವಿತಂತೆ ಮಗುವಿಗೆ ತಾಯ್ ಮಡಿಲ ಸ್ನೇಹ,
ಸಿಹಿಗೆ ನೊಣ ಮುತ್ತುವಂತೆ ಬೆಳೆಯುವುದು ಕಿನ್ನರ ಪಡೆಯ ಸ್ನೇಹ.
ಕಾಮನ ಬಿಲ್ಲಿನೊಳ್ ಬಣ್ಣ ಬೆರೆತಂತೆ ಮನಗಳ ಬೆಸೆಯುವ ಸ್ನೇಹ,
ಮಳೆಯಲ್ಲಿ ಮಾತ್ರ ಹೊಳೆಯದೆ ಸದಾ ಪೂರ್ಣ ಚಂದ್ರನಂತೆ ನಗುವುದು ಹೃದಯದಿ ಸ್ನೇಹ.
ಕಾಲ್ಪನಿಕ ಕನಸಿನ ಸ್ವಾರ್ಥಕ್ಕೆ ಮೂಡುವುದಲ್ಲ ಸ್ನೇಹ,
ಪಾಚಿ ಇರದ ತಿಳೀನೀರಿನಂತೆ ನಮ್ಮೊಳಗೆ ಸ್ವಚ್ಛವಾಗಿರುವುದೇ ಸ್ನೇಹ.
ಬರಡಾದ ಮನಕೆ ಹಸಿರಾಗೋ ಸ್ನೇಹ,
ಹಂಸಕೆ ಮರು ಜೀವ ಕೊಟ್ಟ ಬುದ್ಧನ ಪ್ರೀತಿಯಂತಿರಬೇಕು ನಮ್ಮ ಮಾನವೀಯ ಸ್ನೇಹ.
ಚಲಿಸುವ ಮೋಡಗಳಂತೆ ಚಂಚಲವಿರದ ನಮ್ಮ ಸ್ನೇಹ,
ಜಗಳಕ್ಕೆ ಮುನಿಯದೆ ತನ್ನವರ ಶ್ರೇಷ್ಠತೆಯ ಮೆರೆಸುವುದು ಸ್ನೇಹ.
ಐಶ್ವರ್ಯದ ಆಕರ್ಷಣೆಗೆ ಶರಣಾಗುವುದಿಲ್ಲ ಸ್ನೇಹ,
ಮುಳ್ಳು ಕಲ್ಲುಗಳಿದ್ದರೂ ಮುದುಡದೆ ಮನಕೆ ಮುದ ನೀಡುವುದು ಸ್ನೇಹ.
ಎರಡು ಹೃದಯದ ಭಾವಕೆ ಮಿಡಿಯುವುದು ಸ್ನೇಹ,
ಕೊನೆಯ ಉಸಿರು ಇರುವ ತನಕ ನಂಬಿದವರಿಗೆ ವಿಶ್ವಾಸದ ಹಾಲೆರೆವುದೇ ನಿಜವಾದ ಸ್ನೇಹ.
- nagamani Kanaka
07 Aug 2023, 05:42 am
Download App from Playstore: