ಪ್ರತಿ ದಿನ, ಪ್ರತಿ ಕ್ಷಣವೂ ಹೊಸತು...
ಅಂಟು-ನಂಟಲಿ ಬೆಸೆದು-ಬಿಡಿಸಿಕೊಂಡ ಹದಿನೇಳರ ಗಂಟಿದು...
ನೆರೆ-ಹೊರೆಯಲಿ ಅಳೆದು-ತಳೆದಿಹ ಹದಿನೆಂಟರ ಆಹ್ವಾನವಿದು...|
ಹನ್ನೆರಡರ ಗುಂಪಿನ ಹಾವಕ್ಕೆ, ಮೂವತ್ತರ ಬಿಡಿಕೆಯ ಭಾವವು...
ಹೇಳಲು-ಕೇಳಲು ಶೂನ್ಯವೆನಿಸಿದರೂ, ಶೇಷವಾಗಿಹ ವಿಷಯದ ಸಾಲುಗಳು...||
ಊಹೆ-ಪೊಹೆಗಳಿಗೂ ಮರೀಚಿಕೆಯಾಗಿಹ ಕೌತುಕತೆಗಳು...
ಕನಸು-ಕಲ್ಪನೆಗೂ ಸತ್ಯ-ಸುಳ್ಳಿನ ಪ್ರಶ್ನಾರ್ಥಕ ಚಿಹ್ನೆಗಳು...|
ಸುರಿವ ವರ್ಷಧಾರೆಯೊಂದೆ ಪರ್ವವಾಗಿಹುದು, ಕಾಯೋ ಚಾತಕ ಪಕ್ಷಿಗೆ...
ಅಜ್ಞಾತವಾಸದಲ್ಲೂ ತಿರುವಿನ ನೋಟವಿಹುದು, ಗೀಚಿದ ಪುಟಗಳ ಮೇಲೆ...||
ಆಗು-ಹೋಗುಗಳ ನಿಖರತೆಯನ್ನು ಹೇಳದ ಗಡಿಯಾರದ ಮುಳ್ಳುಗಳು...
ನಿಶೆ-ಉಶೆಗಳ ಮಧ್ಯದಲ್ಲೂ ಸಂದರ್ಭವ ಬಿಚ್ಚಿ ಕೊಡದ ಸಮಯಗಳು...|
ಮಾತು-ಮೌನ ಅದಲು-ಬದಲಾದರೂ, ಸಿಹಿ-ಕಹಿಯ ಅಲೆಗಳು ಅಬ್ಬರಿಸಲೇಬೇಕು...
ಕುರುಡು ಗಣ್ಣಿನ ವೀಕ್ಷಕನಲ್ಲವಾದರೂ, ಮೂಕ ಪ್ರೇಕ್ಷಕನಂತಿಹ ಲೋಕವಿದು ಇಂದು...||
ಸಂಸ್ಕ್ರತಿ-ಸಂವತ್ಸರದಲ್ಲಿ ಇರುವ ಅನುಭವದ ಸಾಲುಗಳೋ...
ಅಜ್ಞಾನ-ವಿಜ್ಞಾನದ ನಡುವೆ ನಡೆಯೋ ವೈಜ್ಞಾನಿಕ ಸಂಶೋಧನೆಗಳೋ...|
ಮೇಲು-ಕೀಳು, ಸರಿ-ತಪ್ಪು, ಬೇಕು-ಬೇಡಗಳ ಹಿಡಿದು ನಡೆಸೋ ಕೂಪಮಂಡೂಕದ ಚರ್ಚೆಗಳೋ...
ಸಿಂಹಗರ್ಜನೆಯ ಅಹಂಭಾವ, ಮದವೇರಿದ ಗಜದ ಮಧ್ಯೆ , ವಾಸ್ತವಿಕದ ದಿನಗಳೋ...||
ಯುಗಗಳೇ ಕಳೆದೂ ಮರಳಲಿ, ವರ್ಷಗಳೇ ಬದಲಾಗಿ ಬರಲಿ...
ಅಂಕಿ-ಅಂಶದ ಸಂಖ್ಯೆಯ ಲೆಕ್ಕ, ಬರೆಯೋ ಕಾಯಕ ನಿಲ್ಲದು...|
ಶ್ವಾಸ-ನಿಶ್ವಾಸದಲ್ಲೂ, ದಿನವೂ ಸತ್ತು-ಹುಟ್ಟಿ ಬಂದ ಮೇಲೂ...
ಪ್ರತಿಕ್ಷಣವೂ ಹೊಸತೆಂದು ಸ್ವಾಗತಿಸಲು ಹಿಂಜರಿಕೆ ಸಲ್ಲದು..||
ಸುಮ
- SUMANA M
29 Jun 2023, 02:01 pm
Download App from Playstore: