ಬಾ ಚಂದಿರ..
ನಿನ್ನಂತೆ ಮತ್ತೊಬ್ಬರಿಲ್ಲ
ಮುಗಿಲಿನಂತೆ ಹರಟಿದರೂ
ಮಳೆಯಂತೆ ಕಣ್ಣ ಹನಿ ಸುರಿದರೂ
ಮೌನವನ್ನೇ ತಬ್ಬಿದರೂ
ನಗುವ ಕಾಂತಿ ಸೂಸಿ
ನನ್ನ ತಬ್ಬಿ ನಿಂತವರೂ
ಅಳು, ನಗು, ಮುನಿಸುಗಳೆಲ್ಲವ
ನಿನ್ನ ಬಳಿ ಇಟ್ಟು , ಬಿಟ್ಟು
ಮಾತು ಮುಗಿದು, ದುಗುಡ ಬರಿದಾಗಿ
ತುಟಿಯಂಚಲ್ಲೊಂದು ನಗು ಮೂಡಿ
ನಲಿದ ದಿನಗಳೆಷ್ಟೊ ನೀ ನಕ್ಕಾಗ
ನನ್ನೆಲ್ಲಾ ಮಾತುಗಳಿಗೆ ಕಿವಿಗೊಟ್ಟು
ನಾನು ನೀನು ಹರಟುವಾಗ
ನಮ್ಮಿಬ್ಬರನೂ ಹಾದು ಹೋದ ಜನರಿಗೆ
ಉರುಳಿ ಹೋದ ಘಳಿಗೆಗಳಿಗೆ
ತುಸು ಮೆಲ್ಲ ಬೀಸಿ ತಂಪರಡಿದ ತಂಗಾಳಿಗೆ
ನಿನ್ನ ಜೊತೆಗಿರಲಾಗದೆ ನೊಂದ ಚುಕ್ಕಿಗಳಿಗೆ
ಲೆಕ್ಕವಿಡಲಾದರೂ ಹೇಗೆ ಹೇಳು?
ನಾನೇನೋ ಮೌನಿ, ಹೇಳಲಿದ್ದರೂ
ಮನದಲ್ಲೇಕೊ ಖಾಲಿತನ
ನೀನು ಏತಕೊ ಮಂಕಾದಂತೆ
ಜೊತೆಗೆ ಹರಟುವವರ್ಯಾರು ಇಲ್ಲದಂತೆ
ಚುಕ್ಕಿಗಳೇಕೊ ನಿನ್ನ ತೊರೆದಂತೆ
ನನಗೇನೊ ಬೇಕೆನಿಸುತಿದೆ ಮತ್ತೆ ಆ ದಿನಗಳು
ನಕ್ಕು ನಲಿದು
ಮಾತುಗಳೆಲ್ಲ ಸುರಿದು
ಚುಕ್ಕಿಗಳ ಕರೆದು
ತಂಗಾಳಿ ಸವಿದು
ಜೊತೆಗೂಡಿ ಒಂದಷ್ಟು ನಡೆದು
ಬರುವೆಯ ಚಂದಿರ ಹಳೆಯ ದಿನಗಳ ನೆನೆದು
- ಶ್ರೀಕಾವ್ಯ
02 Jun 2023, 10:53 pm
Download App from Playstore: