ನಿವೇದನೆ
ಕಾಯುತ್ತಿರುವೆ ಕೆಂಪಿ
ನಿನಗಾಗಿ ನಾ ಹೀಗೆ
ಹತಾಶ ಹೃದಯವ
ಹೊತ್ತುಕೊಂಡು
ಕವಾಟದ ಬಿಸಿ ರಕ್ತಕೆ
ಮಂಜು ಮೆತ್ತಿಕೊಂಡು
ನಿನ್ನ ಗೆಜ್ಜೆಕಾಲಿನ
ಹೆಜ್ಜೆ ಗುರುತಿನ ಮೇಲೆ
ಕೈಯಿಟ್ಟು ಕಣ್ಣೀರಿನ
ಮುತ್ತಿನ ಹನಿಗಳಿಂದ
ಸಿಂಗರಿಸಿಕೊಂಡು
ಆ ದರಿದ್ರ ಬಾಗಿಲು ಯಾಕೋ
ನನ್ನನ್ನೇ ಮೋಹಿಸುತ್ತಿದೆ
ಪದೇ ಪದೆ ನಾನಿಟ್ಟ ನೋಟಕೆ
ಭೂಗರ್ಭದಲ್ಲಿ ಅಲ್ಲೆಲ್ಲೋ
ಇದೆಯಂತೆ ಲಾವಾ
ಅದಕ್ಕೇನು ಕೆಲಸ ಅಲ್ಲಿ?
ಸಿಡಿದು ಕಾರಂಜಿಯಾಗಬಾರದೇ ಇಲ್ಲಿ?
ನಿನ್ನ ವಿರಹದುರಿಯಿಂದ
ಕೊಂಚ ತಂಪು ಕಂಡೇನು...
ಬದುಕುವಾಸೆ ಕಳೆದುಬಿಟ್ಟೆ ನೀನು
ಸಾಯೋಣವೆಂದರೆ ಇನ್ನೂ
ಬದುಕಿರುವೆ ನೀನು
ಮಲ್ಲಿಗೆಯ ಹಾರ ಹಿಡಿದು
ಇಂದು ಸಂಜೆ ಕರೆಮಾಡು
ನಾ ಬದುಕಿದ್ದರೆ
ಮುಡಿದು ಕೊಂಡುಬಿಡು
ಇಲ್ಲದಿದ್ದರೆ ನನ್ನ
ಭಾವಚಿತ್ರಕ್ಕೆ ಹಾಕಿಬಿಡು
ಆ ಮಲ್ಲಿಗೆಯಾದರೂ
ನೆಮ್ಮದಿ ಕಾಣಲಿ
ನಿನ್ನ ಸನಿಹದಲಿ
-ಸೂರ್ಯಸಾರಥಿ
- ಅರುಣ್ ಜಾವಗಲ್
27 Dec 2014, 04:28 am
Download App from Playstore: