ಅವಳು..

ಆಕೆ ಅಲ್ಲಿಯೇ ನಿಂತಿದ್ದಳು ದೂರದಲೆಗಳ ಅಬ್ಬರಕ್ಕೆ ಚಲಿಸದೆ ನಿಂತ ಚಿಗುರೆಳೆಯಂತೆ, ಕಾರ್ಮೋಡದ ಸದ್ದು ಕೇಳಿ ಹೆದರಿ ಅಡಗಿದ ಪುಟ್ಟ ಕಂದನಂತೆ, ಬೆಚ್ಚಗಿನ ಹಾಲಲ್ಲಿ ಬಿದ್ದ ಹುಳಿ ಮೊಸರಿನ ದೂರದಂತೆ, ಆಕೆ ಅಲ್ಲಿಯೇ ನಿಂತಿದ್ದಳು ಅಮ್ಮನ ಕಿರುಬೆರಳು ಸಿಗದ ಮಗುವಿನಂತೆ ಅವನ ದಾರಿ ಕಾಯುತ್ತಾ. ಆಗೊಮ್ಮೆ ಈಗೊಮ್ಮೆ ಸುಡು ಬಿಸಿಲಲ್ಲಿ ಇಣುಕಿನೊಡುವ ತಂಗಾಳಿಯಂತೆ ಅವನ ನೆನಪು ಬಂದಾಗ ಸಣ್ಣಗೆ ಕಂಪಿಸುವಳು ಮತ್ತೆ ಸಾವರಿಕೊಂಡು ಹಾದಿ ನೋಡುವಳು.

ಹಿಂದೆಂದೋ ಬರಿದಾದ ರೋಡಿನಲ್ಲಿ ಕೈ ಹಿಡಿದು ನಡೆದಾಗ ಕೇಳಿದಳಂತೆ ಎಲ್ಲಿಯ ವರೆಗೂ ಈ ನಡುಗೆ ಎಂದು ಅವನ ಉತ್ತರ ಇನ್ನೂ ಕೇಳಿಸಲಿಲ್ಲ ಅವಳಿಗೆ! ನನ್ನವನಾ ನೀನು ಗೊತ್ತಿಲ್ಲ ತಿಳಿದುಕೊಳ್ಳುವ ಗೋಜಿಗೂ ಹೋಗಲಿಲ್ಲ, ಮೌನ ಮುರಿಯುವ ಆಸೆಯೂ ಅವಳಿಗೆ ಇರಲಿಲ್ಲ ವರುಷಗಳುರುಳಿದವು, ತಾರೀಕುಗಳು ಬದಲಾದವು ಅವನ ಸುಳಿವಿಲ್ಲ ಮನೆಯಲ್ಲಲ್ಲ ಮನಸಲ್ಲಿ!! ಎದುರುಬದುರು ಕುಳಿತರು ಆತ್ಮೀಯತೆ ಕಂಡುಬಂದಿಲ್ಲ, ತನ್ನ ಸ್ವತ್ತೆಂದು ಕಟ್ಟಿಹಾಕಲಿಲ್ಲ ಅವನನ್ನು, ಸರಿ ತಪ್ಪುಗಳ ಲೆಕ್ಕ ಮೇಲಿನವನಿಗಿರಲಿ ಅವನ ಹೃದಯ ಸೇರುವ ರಸ್ತೆಯಲ್ಲಿ ಹಿಂದಿರಬಹುದು ನಾನು ಮುಂದೆ ಹೋದವರಿಗೆ ಪ್ರಾಶಸ್ತ್ಯ ಕೊಟ್ಟಿರಬಹುದು ಅವನು...

ತಾನು ತನ್ನದೆಂಬುದ ತೊರೆದವಳು ತನ್ನನ್ನೆ ತಾ ಕೊಟ್ಟವಳು ಅವಳಲ್ಲವೆ! ಹಿಂಪಡೆಯುವುದು ಎಷ್ಟು ಸರಿ ಇರಲಿ ಬಿಡು ಹಿಂಪಡೆದು ತಾನಾದರು ಏನು ಮಾಡಿಯಾಳು ಅಸ್ತಿತ್ವದ ಕಳುವಾದಮೇಲೆ.. ಇಹದ ಚಿಂತೆ ಬೇಡವಾದಮೇಲೆ, ಹಗಲು ಉರುಳಿತು ಹಕ್ಕಿಗಳೆಲ್ಲ ಅವಸವಸರದಿ ಗೂಡು ಸೇರಿದವು ತಾನು ಎದ್ದು ಹೊರಟಳು ನೆನ್ನೆಯ ಚಿಂತೆಗಳು ನಾಳೆಗೆ ಬಿಟ್ಟು ಮರುಳಿನ ಮೇಲೆ ಬರೆದ ಅವನ ಹೆಸರಿಗೆ ಸಿಹಿ ಮುತ್ತೊಂದನಿಟ್ಟು.

- ಚುಕ್ಕಿ

06 Mar 2023, 02:42 pm
Download App from Playstore: