ಶಾಲೆಯಲ್ಲಿ ನಡೆದ ಸಂಭಾಷಣೆ ಟೀಚರ್: ಗುಂಡ, ಗೋಲ್ ಗುಂಬಜ್ ಎಲ್ಲಿದೆ?
ಗುಂಡ: ಬಿಜಾಪುರದಲ್ಲಿ ಇದೆ.
ಟೀಚರ್: ಗೋಲ್ ಗುಂಬಜ್ ನ ವಿಶೇಷತೆ ಏನು?
ಗುಂಡ: ಅದರಲ್ಲಿ ಒಂದು ಸಾರಿ ಹೇಳಿದರೆ, 7 ಬಾರಿ ಕೇಳುತ್ತೆ..
ಟೀಚರ್: ಗೋಲ್ ಗುಂಬಜ್ ನ ಬಿಜಾಪುರದಲ್ಲೇ ಏಕೆ ಕಟ್ಟಿಸಿದ್ದಾರೆ?
ಗುಂಡ: ಸಾರ್, ಬಿಜಾಪುರದ ಜನಕ್ಕೆ ಒಂದು ಸಾರಿ ಹೇಳಿದರೆ ತಿಳಿಯೋಲ್ಲ ಸಾರ್.. ಅದಕ್ಕೆ.
ಕವಲು ಹಾದಿ
——————
ಧುತ್ತೆಂದು ಎದುರಾದದ್ದು ಕವಲು ಹಾದಿ
ಮುಂದೇನು?
ಎಡಕ್ಕೋ ಬಲಕ್ಕೋ
ಯಾವುದು ಸುಗಮ
ಯಾವುದು ದುರ್ಗಮ
ರಾಶಿ ಫಲ ಏನನ್ನುತ್ತೆ?
ಅವರಿವರು ಏನಂತಾರೆ?
ಟಾಸ್ ಮಾಡೋಣವೇ?
ಆದದ್ದಾಗಲಿ ಬಲಕ್ಕೆ ಹೋದರಾಯಿತು.
ಸರಿ ಹೋಗದಿರೆ...
ಹಿಂದೆ ಬಂದರಾಯಿತು.
ನಡೆ.. ನಡೆ..ನಡೆ..
ಅರೆರೆ ಈಕಡೆ ಬರಬಾರದಿತ್ತೇನೋ!
ಹಿಂದಿರುಗಲೇ?
ತುಂಬಾ ಮುಂದೆ ಬಂದಾಯ್ತಲ್ಲ!
ಮತ್ತೆ
ಧುತ್ತೆಂದು ಎದುರಾದದ್ದು ಮತ್ತೊಂದು ಕವಲು ಹಾದಿ.
ಇಡೀ ಜೀವನ ಕವಲುಕವಲುಗಳ ಸರಪಳಿ.
ನಿನ್ನೆಗಳನ್ನು ಮರೆತರೆ
ಇಂದೂ ಮುಂದೂ ಸಂತಸ.
ಇಲ್ಲವೇ ಕೊರಳ ಸುತ್ತ ಸರಪಳಿ.
ಬಂದದ್ದೆಲ್ಲಾ ಬರಲಿ
ಗೋವಿಂದನ ದಯೆ ಇರಲಿ.
ಅಗಾಧವಾದ ನೇಸರ
ಅಪಾರವಾದ ಕಡಲು
ವಿಶಾಲವಾದ ನೆಲ
ಹೊಸಾ ಬೆಳಕು
ಅಲೆಯೇಳಿಸುವ ಗಾಳಿ
ಬಗೆಬಗೆಯ ಗಿಡಮರ
ನೀರಲ್ಲಿ ನೆಲದಲ್ಲಿ ಆಗಸದಲ್ಲಿ
ಎಲ್ಲೆಲ್ಲೂ ತರತರದ ಜೀವ
ನೋಡಲು ಕಣ್ಣು ...
ಅಬ್ಬಾ ಎಂತಹ ಭಾಗ್ಯ!
ಇವಕ್ಕೂ ಮಿಗಿಲಾಗಿ
ಕಾಣಿಸದ ಶಕ್ತಿ ತರಂಗಗಳು
ಇಡೀ ಬ್ರಹ್ಮಾಂಡವನ್ನೇ ಸುತ್ತಿಬರುವ ಮನಸ್ಸು
ಗೊತ್ತಿರದ ನಾಳೆಯನ್ನು
ರೂಪಿಸುವ ಈ ಹೊತ್ತು
ಅಬ್ಬಾ ಎಂತಹ ಭಾಗ್ಯ!
ನಾವಿಲ್ಲಿ ಅವರಲ್ಲಿ
————————
ನಾವಿಲ್ಲಿ ಅವರಲ್ಲಿ.
ಅವರು ನಗುತ್ತಲೇ ಇದ್ದಾರೆ
ನಮ್ಮ ಮನಸ್ಸಿನಲ್ಲಿ ಕೋಪ ಶಾಪ
ಅವರು ನಗುತ್ತಲೇ ಇದ್ದಾರೆ.
ಶಾಪ ತಟ್ಟುವುದು ಬರೀ ಪುರಾಣ.
ನಾವೇಕೆ ಬೇರೆಯವರ ಶಾಪಕ್ಕೆ ಹೆದರಿ ಬದುಕುತ್ತೇವೆ!
ನಾವಿಲ್ಲಿ ಅವರಲ್ಲಿ.
ಅವರಿಗೆ ನಮ್ಮ ಕಾಳಜಿಯೇ ಇಲ್ಲ.
ನಮಗೆ ಅವರದೇ ಚಿಂತೆ.
ಅವರಿಗೆ ನಮ್ಮ ಕಾಳಜಿಯೇ
ಇಲ್ಲ.
ಪ್ರೀತಿಗೆ ಪ್ರೀತಿ ಸಿಗಲೇ ಬೇಕಿಲ್ಲ.
ನಾವೇಕೆ ಸಿಗದ ಪ್ರೀತಿಗೆ
ಕಾದು ಬೇಯುತ್ತೇವೆ!
ನಾವಿಲ್ಲಿ ಅವರಲ್ಲಿ.
ಹಿಂದೊಮ್ಮೆ ಆಡಿದ ಮಾತು
ಅವರಿಗೆ ನೆನಪೇ ಇಲ್ಲ
ನಾವು ನೆನೆನೆನೆದು ಕುಗ್ಗುತ್ತೇವೆ.
ಅವರಿಗೆ ನೆನಪೇ ಇಲ್ಲ
ನಾವೇಕೆ ನಿನ್ನೆಗಳ ಭಾರ
ಹೊತ್ತು ಕುಗ್ಗುತ್ತೇವೆ!