ನೆರೆಮನೆಯ ಜೀತದಲ್ಲಿ ಸವೆಯುತ ಅಪ್ಪ,
ಮಕ್ಕಳನ್ನು ಶಾಲೆಗೆ ಸೇರಿಸಿದರು.
ಹಿಂದೆ ಅನ್ನವಿರದ ದಿನಗಳಲ್ಲಿ ಅಪ್ಪ,
ನಮಗೆ ಗಂಜಿ ಕುಡಿಸಿ ಬೆಳೆಸಿದರು.
ಸೌಮ್ಯ ಸ್ವಭಾವದ ನಮ್ಮ ಅಪ್ಪನ ನಿರಂತರ ದುಡಿಮೆ,
ಕಲಿಸಿತು ನಮಗೆ ಜವಾಬ್ದಾರಿಯುತ ಬದುಕಿನ ನಿರ್ವಹಣೆ.
ಚಿಕ್ಕವಳಾಗಿ ನಾನು ಅಪ್ಪನ ಮಮತೆಯಲ್ಲಿ ಅರಳುವ ಮುನ್ನವೇ,
ಅವರು ನರಳತೊಡಗಿದರು ತಮ್ಮ ಕಾಯಿಲೆ ಏನೆಂದು ತಿಳಿಯದೆ.
ನನ್ನಮ್ಮ ಅಪ್ಪನಿಗಾಗಿ ತಿರುಗದ ಆಸ್ಪತ್ರೆಗಳಿಲ್ಲ,
ದೀರ್ಘಕಾಲ ನೋವಿನಿಂದ ನರಳಿದ ಅಪ್ಪ ನಮಗಾಗಿ ಉಳಿಯಲಿಲ್ಲ.
ನನ್ನ ಬದುಕಿಗೆ ಚುಕ್ಕಿಯ ಚಂದ್ರಮನಾಗಬೇಕಿದ್ದ ಅಪ್ಪ ಇಂದು ನೆನಪು ಮಾತ್ರ.
ಅಪ್ಪನಾಗಿ ನನ್ನ ಉಜ್ವಲ ಭವಿಷ್ಯಕ್ಕೆ ಸಾಕ್ಷಿಯಾಗಿರುವ ಅಮ್ಮನ ತ್ಯಾಗ ಶ್ಲಾಘನೀಯ,
ಅಪ್ಪನಿದ್ದರೆ ನನ್ನ ಜೀವನ ಇನ್ನೂ ಹೇಗಿರುತಿತ್ತೋ,
ಎಂಬ ಪ್ರಶ್ನೆಗೆ ಉತ್ತರವಿಲ್ಲ.
ಮಕ್ಕಳ ಸನ್ಮಾರ್ಗದ ಹಾದಿಯ ಸುಗಮಗೊಳಿಸಲು ಬೇಕು ಅಪ್ಪ,
ಕಣ್ಮರೆಯಲ್ಲೆ ನಮ್ಮ ಬಯಕೆಗಳ ಅರಿತು ಸಂತೃಪ್ತಿಗೊಳಿಸುವ ಭೂಪ.
ಕುಟುಂಬದ ಸಾರಥಿಯಾಗಿರೋ ಅಪ್ಪನ ನಾವ್ ಗೌರವಿಸಬೇಕು,
ನಮ್ಮ ಸೇವೆ ಅಪ್ಪನ ಹೆಸರ ಗುರುತಿಸುವಂತೆ ಇರಬೇಕು,
ಮಕ್ಕಳ ಸರ್ವಾಂಗೀನ ಪ್ರಗತಿಗೆ ಅಪ್ಪ ಜೊತೆಗಿದ್ದರೆ ಸಾಕು.
ಕಾದು ಕಾದು ಸೋತಿಹೆನು
ಸನಿಹ ನೀನು ಬರಬಾರದೆ..
ದೂರ ಏಕೆ ನೀ ನಿಲ್ಲುವೆ..?
ಕರುಣೆ ತೋರಿ ಬರಬಾರದೆ..
ನಿನ್ನ ಅಗಲಿ ನಾ ಇರಲಾರೆನು..
ಪ್ರಾಣವೇ ನೀನು ಜೊತೆಗಾರನು..
ಮರೆಯಾದೆಯಾ ಒಲವೇ...
ಮರೆಯಾದೆಯಾ ...
ಮಾತುಗಳು ನಿಂತರೇನು
ಮನಸು ಕಾದಿದೆ ಇನ್ನು...
ತಿರುಗಿ ನೋಡು ಒಮ್ಮೆ ನೀನು
ನೆರಳಂತೆ ಹಿಂಬಾಲಿಸಿರುವೆ ನಾನು..
ಜನ್ಮ ಜನ್ಮ ನೀನೆ ಬೇಕು..
ನಿನ್ನ ಪ್ರೀತಿಯೊಂದೆ ಸಾಕು...
ಬಾರೋ ಬೇಗ ಗೆಳೆಯ
ನೀನೇ ಒಲವ ಇನಿಯ...
ನೂರಾರು ಆಸೆಗಳು ಮನದಲ್ಲಿ...
ಬರಿ ನೋವುಗಳೇ ತುಂಬಿವೆ ನನ್ನಲ್ಲಿ...
ಯಾಕೆ ಬೇಕಿತ್ತು ನನಗೆ ಈ ಜೀವನ..
ನೋವುಂಡ ಜೀವಕೆ, ಮತ್ತದೇ ನೋವಿನ ಔತಣ..
ಎಲ್ಲಿ ಹೋಯಿತು ಆ ನಿನ್ನ ಸ್ನೇಹ ಇಂದು..
ಕಾಣುತ್ತಿಲ್ಲವೆ ಅಂಗಲಾಚಿ ಬೇಡುತ್ತಿರುವುದು..
ಅಂದು ಪ್ರೀತಿಗೂ ಕವನವೇ ಜೊತೆಗಾರ..
ಇಂದು ದೂರಾದ ಸ್ನೇಹಕ್ಕೂ ಕವನವೇ ಆಧಾರ..
ಸಂತೋಷವ ಕಳೆದುಕೊಂಡಿದೆ ಬದುಕು..
ದುಃಖದಲ್ಲಿ ಮುಳುಗಿದೆ ಮನಸು..
ಸಿಕ್ಕ ಪ್ರೀತಿಯನು ತಾನಾಗಿಯೇ ಒಲ್ಲೆ ಎಂದ ಹೃದಯ ಪರಿತಪಿಸುತ್ತಿದೆ...
ನೂರಾರು ಮಾತುಗಳನಾಡಿದ ತುಟಿಗಳು ಇಂದು
ಮೌನ ತಾಳಿದೆ...
ಯಾರ ಮಾತಿಗೂ ಸ್ಪಂದಿಸದ ಈ ಜೀವ
ನಿನ್ನನ್ನೇ ಹಂಬಲಿಸುತಿದೆ...
ಕೇಳದೆ ನನ್ನ ಮನದ ಮಾತು, ನೀ ಎಲ್ಲಿ ಹೋದೆ...
ಅಪ್ಪ ಅಪ್ಪ ಅಪ್ಪ..
ಎಷ್ಟು ಬಾರಿ ಕರೆದರೂ ಖುಷಿಯೇ..
ಎಷ್ಟು ಪ್ರೀತಿಸಿದರೂ ಕಡಿಮೆಯೇ..
ಅಪ್ಪ ಎಂದಾಕ್ಷಣ ನೆನಪಾಗುವುದು ನಿಮ್ಮ ಗಾಂಭೀರ್ಯ..
ನಿಮ್ಮ ಕೋಪ ಹೇಳಲಸಾಧ್ಯ...
ನಿಮ್ಮ ಪ್ರೀತಿ ಅತಿ ಹೆಚ್ಚು ಮಾಧುರ್ಯ..
ನಿಮ್ಮ ಆದರ್ಶವೇ ಮಾನಸಿಕ ಸ್ಥೈರ್ಯ...
ಅಪ್ಪ ಇಂದು ನೀವು ನೆನಪು ಮಾತ್ರ..
ನಿಮ್ಮಂತಹ ತಂದೆಯ ಪಡೆದ ನಾವು ಧನ್ಯರು..
ಆದರೆ ಇಷ್ಟೇ ವರುಷ ಸಾಕೆ ನಿಮ್ಮೊಂದಿಗೆ ಬದುಕಿದ ಕ್ಷಣಗಳು..??
ನಿಮ್ಮಂತಹ ತಂದೆಯೇ ಎಲ್ಲರಿಗೂ ಸಿಗಲಿ..
ಆದರೆ ಆ ಪ್ರೀತಿ ಕೊನೆವರೆಗೂ ಉಳಿಯಲಿ..
ನೋವಾದಾಗ, ದುಃಖವಾದಾಗ ನೆನಪಾಗುವಿರಿ ತಕ್ಷಣ..
ಕನಸಿನಲ್ಲಾದರು ಬನ್ನಿ ದಿನ ದಿನ..
ಇಂದೇಕೋ ನಿಮ್ಮ ನೆನಪು ಅತಿಯಾಗಿ ಕಾಡುತಿದೆ ಅಪ್ಪ
ಇನ್ನೊಂದು ಜನ್ಮವಿದ್ದರೆ ನಿಮ್ಮ ಮಗಳಾಗಿ ಹುಟ್ಟಬೇಕೆಂಬುದೆ ನನ್ನ ಕೊನೆಯಾಸೆಯಪ್ಪ..
ಪ್ರೀತಿಗೆ ಮತ್ತೊಂದು ಹೆಸರು ನನ್ನ ಅಪ್ಪ ಕೃಷ್ಣಪ್ಪ..